ಅಬ್ದುರ್ ರಹಮಾನ್ ಖಾನ್
	ಆಫ್ಘಾನಿಸ್ಥಾನದ ಬರಕ್‍ಸೈ (ಮಹಮ್ಮದ್‍ಸೈ) ರಾಜವಂಶವನ್ನು ಸ್ಥಾಪಿಸಿದ ದೋಸ್ತ್ ಮಹಮ್ಮದನ ಮೊಮ್ಮಗ (1844-1901). ತಂದೆ ಅಫ್ಸಲ್‍ಖಾನ್. ತಂದೆ ಮ¸óÁರ್ ಪ್ರಾಂತಾಧಿಪತಿಯಾಗಿದ್ದಾಗ ಬಾಲ್ಯವನ್ನೆಲ್ಲ ಅವನೊಂದಿಗೆ ಕಳೆದು ಸೈನಿಕಶಿಕ್ಷಣ ಪಡೆದ. ಅಜ್ಜನ ಮರಣಾನಂತರ, ಪಟ್ಟವೇರಿದ ಷೇರ್ ಆಲಿಗೂ ಅವನ ಸಹೋದರರಿಗೂ ವೈಮನಸ್ಯ ಬೆಳೆದು ಉಂಟಾದ ಯಾದವೀಕಲಹದಲ್ಲಿ ಸೋತು ಅಬ್ದುರ್ ರಹಮಾನ್ ರಷ್ಯದ ತುರ್ಕಿಸ್ಥಾನಕ್ಕೆ ಹೋಗಿ ಅಲ್ಲಿ ಆಶ್ರಯಪಡೆದ. 1870ರಿಂದ ಹತ್ತು ವರ್ಷಕಾಲ ಸಾಮರ್‍ಕಂದ್‍ನಲ್ಲಿದ್ದು ರಷ್ಯನರ ರಾಜ್ಯನೀತಿ ಆಡಳಿತಕ್ರಮಗಳನ್ನು ಕಲಿತ. 1878ರಲ್ಲಿ ಆಪs್ಘನರಿಗೂ ಬ್ರಿಟಿಷರಿಗೂ ಯುದ್ಧ ಪ್ರಾರಂಭವಾಯಿತು. ಷೇರ್ ಅಲಿ ಮರಣ ಹೊಂದಿದ; ಅವನ ಮಗನನ್ನು ಭಾರತಕ್ಕೆ ಗಡೀಪಾರು ಮಾಡಿದರು. ಈ ಸಂದರ್ಭದಲ್ಲಿ ಅಬ್ದುರ್ ರಹಮಾನ್ ಆಫ್ಘಾನಿಸ್ಥಾನಕ್ಕೆ ಹಿಂತಿರುಗಿದ. ಜನರಿಂದ ಅವನಿಗೆ ಅದ್ಭುತಸ್ವಾಗತ ದೊರಕಿತು. ಬ್ರಿಟಿಷರು ಅವನನ್ನು ಪಟ್ಟಕ್ಕೇರಿಸಿ ಸೈನ್ಯವನ್ನು ಹಿಂತೆಗೆದುಕೊಂಡರು. ರಷ್ಯನರು ಮತ್ತು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡು ಗಡಿ-ಪ್ರಶ್ನೆಗಳನ್ನು ಬಗೆಹರಿಸಿದ್ದಲ್ಲದೆ ಹೊರದೇಶಗಳಿಂದ ಪ್ರವೀಣರನ್ನು ಬರಮಾಡಿಕೊಂಡು ಕೈಗಾರಿಕೋದ್ಯಮಗಳನ್ನು ಸ್ಥಾಪಿಸಿ ಹಿಂದುಳಿದಿದ್ದ ಆಫ್ಘನರ ಆರ್ಥಿಕ ಮತ್ತು ಸಾಮಾಜಿಕ ಉನ್ನತಿಗಾಗಿ ಶ್ರಮಿಸಿದ.									

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ